ಮರಿಯಮ್ಮನಹಳ್ಳಿ: ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಗುಂಡಾಗ್ರಾಮದ ರೈತರು ಆಗ್ರಹಿಸಿದ್ದಾರೆ.
ಸೋಮವಾರ ಮರಿಯಮ್ಮನಹಳ್ಳಿಯ ಜೆಸ್ಕಾಂನ ಕಿರಿಯ ಅಭಿಯಂತರಿಗೆ ಗುಂಡಾಗ್ರಾಮದ ರೈತರು ಮನವಿಸಲ್ಲಿಸಿ, ರೈತರ ಜಮೀನುಗಳಿಗೆ ಕಾಡುಹಂದಿ,ನರಿ,ಚಿರತೆ,ಕರಡಿ ಸೇರಿ ಹಲವು ಕಾಡುಪ್ರಾಣಿಗಳು ನುಗ್ಗಿ ಬೆಳೆ ನಾಶ ಮಾಡುತ್ತಿವೆ. ರಾತ್ರಿ ವೇಳೆ ವಿದ್ಯುತ್ ಇಲ್ಲದ ಕಾರಣ ಹೊಲದ ಸುತ್ತ ಹಾಕಿರುವ ತಂತಿ ಬೇಲಿ ನಿಷ್ಕ್ರಿಯವಾಗುತ್ತಿದೆ. ಇದರಿಂದ ಕಾಡುಪ್ರಾಣಿಗಳು ನೇರವಾಗಿ ಹೊಲಗಳಿಗೆ ನುಗ್ಗುತ್ತಿವೆ.
ಕಳೆದ ಕೆಲ ದಿನಗಳಿಂದ ಜೋಳ,ಕಡಲೆ ಬೆಳೆಗಳು ಸಂಪೂರ್ಣ ನಾಶವಾಗಿವೆ. ರೈತರು ರಾತ್ರಿಯಿಡೀ ಟಾರ್ಚ್ ಹಿಡಿದು ಹೊಲ ಕಾಯುವಂತಾಗಿದೆ.
ಕೂಡಲೇ ಜೆಸ್ಕಾಂ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸಿ, ರಾತ್ರಿ ವೇಳೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಈ ಸಂಧರ್ಭದಲ್ಲಿ ಹೂಲೆಪ್ಪ, ಕಾಶಪ್ಪ, ಉಮೇಶ್, ದಳವಾಯಿಸೋಮಣ್ಣ, ಚೆನ್ನಬಸಪ್ಪ, ಗೂಳೆಪ್ಪ, ಹೆಚ್.ಬಿ.ಕೃಷ್ಣ,ಪಕ್ಕೀರಪ್ಪ, ಲೋಕರಾಜ್, ಅಂಬರೀಷ್, ಚಿನ್ನಾಪ್ರಪ್ಪ, ಹನುಮಯ್ಯ, ರಮೇಶ್ ಸೇರಿದಂತೆ ಇತರರಿದ್ದರು.