ಕೂಡ್ಲಿಗಿ: ಮಾನವರಂತೆ ವನ್ಯಜೀವಿಗಳಿಗೂ ಜೀವಿಸುವ ಹಕ್ಕು ಪರಿಸರ ಹಾಗೂ ಸಂವಿಧಾನ ನೀಡಿದ್ದು ವನ್ಯಜೀವಿಗಳ ಹತ್ಯೆ ಮತ್ತು ಅರಣ್ಯದಲ್ಲಿ ಕಳ್ಳಬೇಟೆ ಆಡುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಒ. ಮುರಾರ್ಜಿ ತಿಳಿಸಿದರು.
ಶನಿವಾರ ಪಟ್ಟಣದ ರಾಜವೀರ ಮದಕರಿ ನಾಯಕ ವೃತ್ತದಲ್ಲಿ ಪ್ರಾದೇಶಿಕ ಅರಣ್ಯ ವಲಯ ಕೂಡ್ಲಿಗಿ ವತಿಯಿಂದ 72 ನೇ ವನ್ಯಜೀವಿ ಸಪ್ತಾಹ ಅಂಗವಾಗಿ ಬೀದಿನಾಟಕ ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕಾನೂನಿನ ಬಗ್ಗೆ ಅರಿವಿಲ್ಲದ ಕೆಲವರು ಅರಣ್ಯದಲ್ಲಿ ಕಳ್ಳಬೇಟೆ ಹಾಗೂ ಪ್ರಾಣಿಗಳ ಹತ್ಯೆ ಮಾಡುತ್ತಿರುವ ಕೆಲ ಪ್ರಕರಣಗಳು ಸಂರಕ್ಷಿತ ಅಭಯಾರಣ್ಯಗಳಲ್ಲಿ ಕಂಡು ಬರುತ್ತಿವೆ ಇಂತಹ ಪ್ರಕರಣಗಳ ಬಗ್ಗೆ ಸಮುದಾಯಕ್ಕೆ ಜಾಗೃತಿ ನೀಡಿ ಪರಿಸರ ಹಾಗೂ ವನ್ಯಜೀವಿಗಳ ಸಂತತಿ ಉಳಿಸುವುದು ಅರಣ್ಯ ಇಲಾಖೆಯ ಮುಖ್ಯ ಧ್ಯೇಯವಾಗಿದ್ದು ಪ್ರತಿಯೊಬ್ಬರು ಕಾನೂನಿಗೆ ಗೌರವ ನೀಡಿ ಅದನ್ನು ತಮ್ಮ ದೈನಂದಿನ ಬದುಕಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಪರಿಸರ ಮಾನವನ ಬದುಕಿಗೆ ಮುಖ್ಯ ಆಧಾರ ಗಿಡಮರಗಳಿಲ್ಲದೆ ನಾವುಗಳು ಬದುಕಲು ಸಾಧ್ಯವಿಲ್ಲ ಹೀಗಿದ್ದರೂ ನಾವುಗಳು ಪರಿಸರದ ಮೇಲೆ ದಾಳಿ ಮಾಡುತ್ತೇವೆ ಅರಣ್ಯ ಅತಿಕ್ರಮಣ ಮಾಡುವುದು ಗಿಡಮರಗಳ ಕಡಿಯುವುದು ಮಾಡಿದರೆ ಜೀವ ಸಂಕುಲ ಸಸ್ಯ ಸಂಕುಲ ನಾಶವಾಗುವುದಲ್ಲದೆ ಮಾನವನು ಸಹ ಕೊನೆಗೆ ನಾಶವಾಗುವೆನು ಎಂಬ ಸ್ವಯಂ ಜಾಗೃತದ ಅರಿವಿಟ್ಟುಕೊಂಡು ಅರಣ್ಯ ಇಲಾಖೆಯ ಕಾರ್ಯಗಳಿಗೆ ಕೈ ಜೋಡಿಸಿ ಪರಿಸರವನ್ನು ಮತ್ತು ವನ್ಯಜೀವಿಗಳನ್ನು ಕಾಪಾಡಬೇಕೆಂದು ತಿಳಿಸಿದರು.
ಈ ವೇಳೆ ಉಪ ವಲಯಾರಣ್ಯಾಧಿಕಾರಿ ಶಿವಕುಮಾರ್ ಬೀದಿನಾಟಕ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅರಣ್ಯ ರಕ್ಷಕರಾದ ಕಿರಣ್, ಕೊತ್ಲಪ್ಪ, ಕಲಾವಿದರಾದ ವಿಜಯಕುಮಾರ್, ಆಶಾ, ಮಂಜುನಾಥ್, ಶೀಲಾ ಮತ್ತಿತರರು ಉಪಸ್ಥಿತರಿದ್ದರು.
ಅಕ್ಷರ ಸಂಸ್ಥೆಯ ಕಲಾವಿದರು ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು.