ನಾಯಕನಹಟ್ಟಿ: ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಮೂಲಕ ಅಮೂಲ್ಯವಾದ ಜೀವಗಳನ್ನು ರಕ್ಷಿಸಬಹುದು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಬೆಳೆಸಿಕೊಂಡು, ತಮ್ಮ ಕುಟುಂಬ ಹಾಗೂ ಸಮಾಜದಲ್ಲಿಯೂ ಜಾಗೃತಿ ಮೂಡಿಸಬೇಕು ಎಂದು ಸಂಜೀವಿನಿ ಜೀವ ರಕ್ಷಕ ಟ್ರಸ್ಟ್, ಕರ್ನಾಟಕದ ಸಂಸ್ಥಾಪಕರಾದ ಡಾ. ಸೌಮ್ಯ ಮಂಜುನಾಥ್ ಹೇಳಿದರು.
ಪಟ್ಟಣದ ಹೊರಮಠ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಇಂದಿನ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳನ್ನು ಬಳಸುತ್ತಿದ್ದು, ಸಂಚಾರ ನಿಯಮಗಳ ಅರಿವು ಮತ್ತು ಜವಾಬ್ದಾರಿಯುತ ಚಾಲನಾ ವರ್ತನೆ ಅತ್ಯಂತ ಅಗತ್ಯವಾಗಿದೆ. ಹೆಲ್ಮೆಟ್ ಧರಿಸುವುದು, ಸೀಟ್ ಬೆಲ್ಟ್ ಬಳಸುವುದು, ವೇಗದ ಮಿತಿ ಪಾಲಿಸುವುದು, ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸದಿರುವುದು ಹಾಗೂ ಸಂಚಾರ ಸಂಕೇತಗಳನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
“ವೇಗವಾಗಿ ತಲುಪುವುದು ಮುಖ್ಯವಲ್ಲ; ಸುರಕ್ಷಿತವಾಗಿ ತಲುಪುವುದು ಮುಖ್ಯ. ರಸ್ತೆ ಸುರಕ್ಷತೆ ಕೇವಲ ಸರ್ಕಾರದ ಅಥವಾ ಪೊಲೀಸ್ ಇಲಾಖೆಯ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ” ಎಂದು ಡಾ. ಸೌಮ್ಯ ಮಂಜುನಾಥ್ ಹೇಳಿದರು.
ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಗಾಬರಿಗೊಳ್ಳದೆ, ಗಾಯಾಳುಗಳಿಗೆ ತುರ್ತು ಸಹಾಯ ಒದಗಿಸುವ ಕುರಿತು ವಿದ್ಯಾರ್ಥಿಗಳಿಗೆ ಮೂಲಭೂತ ಅರಿವು ಇರಬೇಕು. ಪ್ರಾಥಮಿಕ ಚಿಕಿತ್ಸೆ ಹಾಗೂ ತುರ್ತು ಸ್ಪಂದನೆಯ ಬಗ್ಗೆ ಯುವಜನರಿಗೆ ತರಬೇತಿ ನೀಡುವುದರಿಂದ ಅಪಘಾತದ ಸಂದರ್ಭಗಳಲ್ಲಿ ಜೀವ ರಕ್ಷಿಸುವ ಕಾರ್ಯಕ್ಕೆ ನೆರವಾಗಬಹುದು ಎಂದರು.
ವಿದ್ಯಾರ್ಥಿಗಳು ತಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ರಸ್ತೆ ಸುರಕ್ಷತಾ ನಿಯಮಗಳ ಕುರಿತು ತಿಳಿಸುವ ಮೂಲಕ ‘ರಸ್ತೆ ಸುರಕ್ಷತೆ–ಜೀವ ರಕ್ಷಣೆ’ ಎಂಬ ಸಂದೇಶವನ್ನು ಸಮಾಜದಾದ್ಯಂತ ತಲುಪಿಸಬೇಕು ಎಂದು ಕರೆ ನೀಡಿದರು.
ಪೊಲೀಸ್ ವೃತ್ತ ನಿರೀಕ್ಷಕರಾದ ಹನುಂತಪ್ಪ ಶಿರೆಹಳ್ಳಿ ಮಾತನಾಡಿ ವಾಹನಗಳಲ್ಲಿ ಸಾಮರ್ಥ್ಯಕ್ಕಿಂತ (ನಿಯಮಕ್ಕಿಂತ) ಹೆಚ್ಚು ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಿದ್ದೇ ಆದಲ್ಲಿ ಅಂತಹ ವಾಹನ ಚಾಲಕರ, ಮಾಲೀಕರ ಡ್ರೈವಿಂಗ್ ಲೈಸನ್ಸ್, ಆರ್ಸಿ ರದ್ದು ಮಾಡುತ್ತೇವೆ. ಈಗಾಗಲೇ ಆಟೋ, ವ್ಯಾನ್, ಶಾಲಾ ಬಸ್ಗಳ ಮೇಲೆ ಕಣ್ಣಿಟ್ಟಿದ್ದೇವೆ. ಆದರೂ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವುದು ಕಂಡು ಬಂದಲ್ಲಿ ಹಾಗೂ ನಿಯಮ ಮೀರಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ ಹಾಗೂ ನಿಮ್ಮ ಗ್ರಾಮಗಳಲ್ಲಿ ಗಾಂಜಾ ಏನಾದರು ಬೆಳೆದಿದ್ದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಹಾಗೂ ನಿಮ್ಮ ಗ್ರಾಮಗಳಲ್ಲಿ ಬಾಲ್ಯವಿವಾಹ ಕಂಡು ಬಂದಲ್ಲಿ ನಿಮ್ಮ ಅಂಗನವಾಡಿ ಮೇಡಂರವರಿಗೆ ಮತ್ತು ಪಿಡಿಓಗಳಿಗೆ ತಕ್ಷಣವೇ ಮಾಹಿತಿ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ‘ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಮತ್ತು ಕಾರ್ ಸವಾರರು ಸೀಟ್ ಬೆಲ್ಟ್ ಧರಿಸಬೇಕು. 18 ವರ್ಷದೊಳಗಿನ ಮಕ್ಕಳು ವಾಹನ ಚಾಲನೆ ಮಾಡಬಾರದು. ಮಕ್ಕಳಿಗೆ ವಾಹನ ಕೊಟ್ಟವರಿಗೆ ದಂಡ ವಿಧಿಸಲಾಗುವುದು. ಚಾಲನಾ ಪರವಾನಗಿ, ವಿಮೆ ಇಲ್ಲದೆ ವಾಹನ ಓಡಿಸಬೇಡಿ. ರಸ್ತೆಯಲ್ಲಿ ವ್ಹೀಲಿ ಮಾಡಬೇಡಿ’ ಎಂದು ಕಿವಿಮಾತು ಹೇಳಿದರು. ಕುಡಿದು ವಾಹನ ಚಾಲನೆ ಮಾಡಬೇಡಿ, ಫೋನ್ ಕರೆ ಬಂದ ತಕ್ಷಣವೆ ಗಾಡಿ ಪಕ್ಕದಲ್ಲಿ ನಿಲ್ಲಿಸಿ ಮಾತನಾಡಿ ಎಂದು ತಿಳಿಸಿದರು.’
ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಸಂಸ್ಥಾಪಕರಾದ ರಂಗಸ್ವಾಮಿ ಮಾತನಾಡಿ ನಮ್ಮ ಸಂಸ್ಥೆ ಸುಮಾರು ವರ್ಷಗಳಿಂದ ನಿರಂತರ ಸೇವೆಯಲ್ಲಿದ್ದು ಇದರ ಸಂಸ್ಥಾಪ ಕೀಯಾಗಿರುವಂತಹ ಡಾ. ಸೌಮ್ಯ ಮಂಜುನಾಥ ಸ್ವಾಮಿಯವರು ಈ ಸಂಸ್ಥೆಯ ಉಳಿವಿಗೆ ನಿರಂತರವಾಗಿ ಶ್ರಮವಹಿಸಿರುವುದು ನಮ್ಮೆಲ್ಲರ ಹೆಮ್ಮೆ ಹಾಗೆಯೇಇತ್ತೀಚಿನ ದಿನಗಳಲ್ಲಿಯುವಕರು ಹೆಚ್ಚಾಗಿ ವಾಹನಗಳಲ್ಲಿ ನಿರಂತರವಾಗಿ ವಾಹನಗಳ ಚಲನೆಯಲ್ಲಿ ಇರುತ್ತಾರೆ ಅಪಘಾತಗಳು ನಮ್ಮ ಗಮನಕ್ಕೆ ಬಾರದೆ ನಡೆಯುವುದರಿಂದ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ತಮ್ಮ ಜೀವನದೊಂದಿಗೆ ಬೇರೆಯವರ ಜೀವಗಳ ರಕ್ಷಣೆಗಳು ನಮ್ಮ ಜವಾಬ್ದಾರಿ ಆಗಿರುತ್ತದೇ ಆದ್ದರಿಂದ ಜೀವ ಒಮ್ಮೆ ಹೋದರೆ ಮತ್ತೆ ಬಾರದು ಇದರಿಂದ ಎಚ್ಚೆತ್ತುಕೊಂಡು ನಾವು ಸುರಕ್ಷತೆಯೊಂದಿಗೆ ಬದುಕಬೇಕಾದ ಅವಶ್ಯಕತೆ ಯುವಜನರಲ್ಲಿ ಅವಶ್ಯಕವಾಗಿದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕೂಡ ತಮ್ಮ ಕಲಿಕಾ ಅಂತದಲ್ಲೇ ರಸ್ತೆ ಸುರಕ್ಷತೆ ಬಗ್ಗೆ ತಿಳಿದುಕೊಳ್ಳುವುದು ಉತ್ತಮವಾದ ಕಾರ್ಯವಾಗಿದೆ ಎಂದು ಜೀವ ರಕ್ಷಕ ಟ್ರಸ್ಟ್ ರಾಜ್ಯ ಅಧ್ಯಕ್ಷ ರಂಗಸ್ವಾಮಿ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್, ನಾಯಕನಹಟ್ಟಿ ಪಿ.ಎಸ್.ಐ. ಪಾಂಡುರAಗಪ್ಪ, ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಬಸಪ್ಪನಾಯಕ, ತಾಲ್ಲೂಕು ಅಧ್ಯಕ್ಷ ಮುತ್ತಯ್ಯ, ಡಾ.ಸೌಮ್ಯ, ಈ.ಮಧು ತೊರೆಕೋಲಮ್ಮನಹಳ್ಳಿ, ಪ್ರಸನ್ನಗೌಡ, ವೈಶಾಲಿ, ರೈತ ಸಂಘದ ಅಧ್ಯಕ್ಷ ನಾಗರಾಜ್ ಮೀಸೆ, ನವೀನ ಮದಕರಿ ಹಾಗೂ ಜೀವ ರಕ್ಷದ ಟ್ರಸ್ಟ್ ಪದಾಧಿಕಾರಿಗಳು ಹಾಗೂ ವಿದ್ಯಾವಿಕಾಸ್ ಶಾಲೆ, ರಾಜಾಹಟ್ಟಿ ಮಲ್ಲಪ್ಪನಾಯಕ ಶಾಲೆ, ಮಯೂರ ಇಂಟರ್‌ನ್ಯಾಷನಲ್ ಶಾಲೆಯ ಮಕ್ಕಳು, ಶಿಕ್ಷಕರು ಉಪಸ್ಥಿತರಿದ್ದರು.