ಬಳ್ಳಾರಿ : ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಕೇವಲ ಮಣ್ಣಿನ ಗಣಪತಿ ಮೂರ್ತಿಗಳನ್ನು ಮಾತ್ರ ಬಳಸಬೇಕು ಮತ್ತು ಮನೆಗಳಲ್ಲೇ ವಿಸರ್ಜನೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಹೇಳಿದರು.
ಅರಣ್ಯ ಇಲಾಖೆ ವತಿಯಿಂದ ನಗರದ ಬೆಳಗಲ್ ಕ್ರಾಸ್‌ನ ಅರಣ್ಯ ಇಲಾಖೆಯ ನರ್ಸರಿ ಪ್ರಕೃತಿ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪರಿಸರ ಸ್ನೇಹಿ ವೃಕ್ಷ ಗಣೇಶ ಮೂರ್ತಿ ಮಣ್ಣಿನಿಂದ ತಯಾರಿಸುವ ಕಾರ್ಯಗಾರವನ್ನು ಮಣ್ಣಿನ ಗಣೇಶನ ಮೂರ್ತಿ ಮಾಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಹಾಗೂ ಹಾನಿಕಾರಕ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳನ್ನು ಸಂಪೂರ್ಣವಾಗಿ ತ್ಯಜಿಸಿ, ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳನ್ನೇ ಪೂಜಿಸಬೇಕು ಎಂದು ತಿಳಿಸಿದರು.

ಮೂರ್ತಿಗಳನ್ನು ಮನೆಗಳಲ್ಲಿಯೇ ವಿಸರ್ಜನೆ ಮಾಡುವುದರಿಂದ ನೈಸರ್ಗಿಕ ಜಲಮೂಲಗಳು ಕಲುಷಿತಗೊಳ್ಳುವುದನ್ನು ತಪ್ಪಿಸಬಹುದು. ಪಿಒಪಿ ಮತ್ತು ಕೃತಕ ರಾಸಾಯನಿಕಗಳನ್ನು ಕೆರೆ, ನದಿಗಳಲ್ಲಿ ವಿಸರ್ಜಿಸುವುದರಿಂದ ನೀರಿನಲ್ಲಿ ಅಪಾಯಕಾರಿ ರಾಸಾಯನಿಕ ಮಾಲಿನ್ಯಕಾರಕಗಳು ಸೇರುತ್ತವೆ. ಇದು ನೀರಿನ ಪಿಎಚ್ ಮಟ್ಟ ಹಾಗೂ ಜೈವಿಕ-ರಾಸಾಯನಿಕ ಆಕ್ಸಿಜನ್ ಬೇಡಿಕೆ ಮೇಲೆ ಗಂಭೀರ ಪರಿಣಾಮ ಬೀರಿ ಮೀನುಗಳು ಸೇರಿದಂತೆ ಜಲಚರಗಳಿಗೆ ಮಾರಕವಾಗುತ್ತದೆ ಎಂದು ಹೇಳಿದರು.
ಯುವಕರು ತಮ್ಮ ಕುಟುಂಬ, ಸ್ನೇಹಿತರು ಮತ್ತು ಬಂಧುಗಳಿಗೆ ಪರಿಸರ ಸ್ನೇಹಿ ಆಚರಣೆಯ ಮಹತ್ವ ತಿಳಿಸುವುದರ ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಣ್ಣಿನ ಗಣಪತಿ ಬಳಕೆಯ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿ ಉಳಿಸುವುದು ಪ್ರತಿಯೊಬ್ಬರ ಹೊಣೆ. ಸಂಸ್ಕೃತಿಯನ್ನು ಆಚರಿಸುವಾಗ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದೇ ನೈಜ ಆಚರಣೆ ಎಂದು ಕರೆ ನೀಡಿದರು.

ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ ಕೆ.ಎನ್ ಅವರು ಮಾತನಾಡಿ, ಮಣ್ಣಿನ ಗಣಪತಿ ತಯಾರಿಕೆಯಲ್ಲಿ ನೈಸರ್ಗಿಕ ಮಣ್ಣಿನ ಜೊತೆಗೆ ವಿವಿಧ ಕಾಡು ಜಾತಿಯ ಗಿಡ-ಮರಗಳ ಬೀಜಗಳನ್ನು ಸೇರಿಸಲಾಗಿದೆ. ಗಣೇಶ ಹಬ್ಬದ ನಂತರ ಮೂರು ದಿನಗಳ ಕಾಲ ಪೂಜಿಸಿ, ಬಕೆಟ್‌ನಲ್ಲಿ ನೀರು ಹಾಕಿ ವಿಸರ್ಜನೆ ಮಾಡಿದಾಗ, ಆ ನೀರಿನಲ್ಲಿ ಕರಗಿದ ಮಣ್ಣು ಮತ್ತು ಬೀಜಗಳು ನೆಲಕ್ಕೆ ಸೇರುತ್ತವೆ. ಆ ಬೀಜಗಳು ಮೊಳಕೆಯೊಡೆದು ಗಿಡಗಳಾಗಿ ಬೆಳೆಯುತ್ತವೆ. ಹೀಗೆ ಬೆಳೆದ ಸಸಿಗಳನ್ನು ಪೋಷಿಸಿ ಮರಗಳನ್ನಾಗಿ ಬೆಳೆಸುವ ಮೂಲಕ ಪರಿಸರವನ್ನು ರಕ್ಷಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಯಾವುದೇ ಬಣ್ಣವಿಲ್ಲದ ನೈಸರ್ಗಿಕ ಮಣ್ಣಿನ ಗಣಪತಿಯನ್ನೇ ಬಳಸಬೇಕು. ಬಣ್ಣದ ಲೇಪನ ಬಯಸುವವರು ಅರಿಶಿನ ಮತ್ತು ಕುಂಕುಮದಂತಹ ನೈಸರ್ಗಿಕ ವಸ್ತುಗಳನ್ನೇ ಬಳಸಬೇಕು. ಇದು ಕೇವಲ ಒಂದು ದಿನದ ಹೊರಾಂಗಣ ಚಟುವಟಿಕೆಯಾಗದೆ, ಮಕ್ಕಳು ತಮ್ಮ ಜೀವನಪರ್ಯಂತ ಪರಿಸರ ಕಾಳಜಿಯನ್ನು ಸಂಸ್ಕೃತಿಯ ಭಾಗವಾಗಿ ಅಳವಡಿಸಿಕೊಳ್ಳಬೇಕು ಎಂದು ಪ್ರೇರೇಪಿಸಿದರು.

ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ತಾವೇ ಸ್ವತಃ ತಯಾರಿಸಿದ ಮಣ್ಣಿನ ಗಣಪತಿಯನ್ನು ಮನೆಗೆ ಕೊಂಡೊಯ್ದು ಪ್ರತಿಷ್ಠಾಪಿಸಿ, ಪೂಜಿಸುವಂತೆ ಕರೆ ನೀಡಿದ ಅವರು, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮಗೆ ನಾವೇ ಮಾಡಿಕೊಳ್ಳುವ ಸೇವೆ ಎಂದು ಅಭಿಪ್ರಾಯಪಟ್ಟರು.
ಮಣ್ಣಿನ ಗಣಪತಿ ಮೂರ್ತಿ ತಯಾರಿಕೆಯ ಪ್ರಾತ್ಯಕ್ಷಿಕೆ ಕಾರ್ಯಾಗಾರದಲ್ಲಿ ಸುಮಾರು 80 ರಿಂದ 90 ವಿದ್ಯಾರ್ಥಿಗಳು ಪಾಲ್ಗೊಂಡು ಸ್ವತಃ ತಮ್ಮ ಕೈಗಳಿಂದಲೇ ಪರಿಸರಸ್ನೇಹಿ ಗಣಪತಿ ಮೂರ್ತಿಗಳನ್ನು ತಯಾರಿಸುವ ವಿಧಾನವನ್ನು ಕಲಿತರು.

ಹಂಪಿ ವಿಶ್ವವಿದ್ಯಾಲಯದ ಕಲಾ ವಿಭಾಗದ ಪಿಹೆಚ್‌ಡಿ ಸಂಶೋಧನಾರ್ಥಿಗಳು ಮಣ್ಣಿನ ಗಣೇಶ ಮೂರ್ತಿ ಮಾಡುವ ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿನಯ್.ಕೆ.ಸಿ., ವಲಯ ಅರಣ್ಯಾಧಿಕಾರಿ ರಾಜು ಗೋಂದಕರ್ ಸೇರಿದಂತೆ ನಗರದ ವಿವಿಧ 20 ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿ ಸುಮಾರು 2700 ಜನರು ಭಾಗವಹಿಸಿದ್ದರು.